ಫೋಗ್ಯಾಟ್ಸಾರೊ, ಆಂಟೋನಿಯೊ
 	1842-1911. ಹತ್ತೊಂಬತ್ತನೆ ಶತಮಾನದ ಇಟಲಿಯ ಕವಿ, ನಾಟಕಕಾರ, ಕಾದಂಬರಿಕಾರ. ಇವನ ಸುಪ್ರಸಿದ್ದ ಕಾದಂಬರಿಗಳೆಂದರೆ ಮೊಲೊಂಬ್ರಾ, ಡ್ಯಾನಿಎಲ್ ಕೋರ್ಟಿಸ್ ಮತ್ತು ಪಿಕೊಲೊಮೊಂಡೊ ಆ್ಯಂಟಿ ಕೊ ಮತ್ತು ಸಂತ. ಮೊಲೊಂಬ್ರಾದಲ್ಲಿ ಕ್ಯಾತೊಲಿಕ್ ಧರ್ಮದ ವಿಚಾರವಾಗಿ ತನಗುಂಟಾದ ಮಾನಸಿಕ ಘರ್ಷಣೆಗಳನ್ನು ಚಿತ್ರಿಸಿದ್ದಾನೆ. ಎರಡನೆಯ ಕಾದಂಬರಿಯಲ್ಲಿ ಇಟಲಿಯ ಲುಗಾನೋ ಸರೋವರದ ಸುತ್ತಲಿನ ಹಳ್ಳಿಯ ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ಆಸ್ಟ್ರಿಯನ್ ಯುದ್ಧಕಾಲದ ಹತ್ತುವರ್ಷಗಳ ಪರಿಮಿತಿಯಲ್ಲಿ ಕಥೆಯನ್ನು ಹೆಣೆದಿದ್ದಾನೆ. ಕಥಾನಾಯಕ ಮುಗ್ಧಹೃದಯದ ಧರ್ಮಶ್ರದ್ಧೆಯುಳ್ಳ ವ್ಯಕ್ತಿ. ಅವನ ಪತ್ನಿ ಲೂಯಿಸಾ ಅವಳ ಪುಟ್ಟಮಗಳು ಮರೈಯಾ ಕಠಿಣ ಹೃದಯಿಯಾದ ಅವನ ತಾಯಿ ಈ ವಿಭಿನ್ನ ಸ್ವಭಾವದ ವ್ಯಕ್ತಿಗಳ ನಡುವಣ ವೈಷಮ್ಯಗಳೇ ಈ ದುರಂತ ಕಾದಂಬರಿಯ ವಸ್ತು. ಕೇವಲ ಧಾರ್ಮಿಕ ಶ್ರದ್ಧೆ, ಅಂಧ ಆಸಕ್ತಿಗಳಿಂದ ಬಾಳಿಗೆ ಚೈತನ್ಯ ದೊರೆಯದು; ವಿಜ್ಞಾನ, ತರ್ಕ ಜಿಜ್ಞಾಸೆಗಳಿಂದ ಮಾನಸಿಕ ಘರ್ಷಣೆಗಳನ್ನು ತೊಡೆದುಹಾಕಲು ವ್ಯಕ್ತಿಗೆ ಸ್ವಾತಂತ್ರ್ಯವಿರಬೇಕು ಎಂಬುದೇ ಇವನ ವಾದ. ಸಂತ ಎಂಬ ಕಾದಂಬರಿಯಲ್ಲಿ ವೈಜ್ಞಾನಿಕ ದೃಷ್ಟಿವೈಶಾಲ್ಯದಿಂದ ಕ್ಯಾತೊಲಿಕ್ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯನ್ನು ನಿರೂಪಿಸುತ್ತಾನೆ. ಈ ವಾದ ಆಸ್ತಿಕ ಚರ್ಚಿನ ಖಂಡನೆಗೆ ಒಳಗಾಯಿತು.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ